ಪರೀಕ್ಷೆಗಳು -
	ವ್ಯಕ್ತಿ ಯಾವುದಾದರೂ ಕ್ಷೇತ್ರದಲ್ಲಿ ಪಡೆದಿರುವ ಸಾಮಥ್ರ್ಯ ಸಾಧಿಸಿರುವ ಸಿದ್ಧಿ, ಪಡೆದಿರುವ ಜ್ಞಾನ ಅಥವಾ ಕೌಶಲ್ಯ ಮುಂತಾದವನ್ನು ಅಳೆದು ಬೆಲೆ ಕಟ್ಟುವ ಕಾರ್ಯ ; ಅದಕ್ಕಾಗಿ ಬಳಸುವ ಸಾಧನಕ್ಕೂ ಈ ಹೆಸರನ್ನು ಬಳಸುವುದುಂಟು. ಪರೀಕ್ಷೆ ಮಾನವ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ಪ್ರಚಾರದಲ್ಲಿರುವುದು ಕಂಡುಬರುತ್ತದೆ. ಸಾರ್ವಜನಿಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆರಿಸುವುದಕ್ಕಾಗಿ ಮೊಟ್ಟಮೊದಲು ಚೀನ ದೇಶ ಪರೀಕ್ಷಾ ಪದ್ಧತಿಯನ್ನು ಆರಂಭಿಸಿತೆಂದು ಹೇಳುವುದುಂಟು. ಭಾರತದಲ್ಲೂ ಇತರ ಕೆಲವು ದೇಶಗಳಲ್ಲೂ ಅವು ಸಹಸ್ರಾರು ವರ್ಷಗಳಿಗೂ ಹಿಂದಿನಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರದಲ್ಲಿವೆ. ಪೌರಾಣಿಕ ಯುಗದಲ್ಲಿ ಜನಕರಾಯನ ಆಸ್ಥಾನದಲ್ಲಿ ನಡೆಯುತ್ತಿದ್ದ ವಿದ್ವದ್ಗೋಷ್ಠಿಯಲ್ಲಿ ಇಂಥ ಪರೀಕ್ಷೆಗಳು ಸರ್ವಸಾಮಾನ್ಯವಾಗಿದ್ದವು. ಯಾಜ್ಞವಲ್ಕ್ಯ-ಗಾರ್ಗೇಯಿ ವಾಗ್ವಾದ ಇದಕ್ಕೊಂದು ನಿದರ್ಶನ. ಪಾಂಡವರು ವನವಾಸದಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಯಕ್ಷ ಬಳಸಿದ ಪ್ರಶ್ನೆಗಳು ಪ್ರಸಿದ್ಧವಾಗಿಯೆ ಇವೆ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಗುರುಕುಲದ ಉನ್ನತ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳು ಸಾರ್ವಜನಿಕವಾಗಿ ವಿದ್ವದ್ಗೋಷ್ಠಿಯೊಂದರಲ್ಲಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಬೇಕಾಗಿತ್ತು. ತಮ್ಮ ವಿದ್ಯಾಸಾಧನೆಯ ಅನಂತರ ಏರ್ಪಡುತ್ತಿದ್ದ ಈ ಸಮಾರಂಭ ಒಂದು ಪರೀಕ್ಷೆಯೇ ಆಗಿತ್ತು. ರಾಜಾಸ್ಥಾನಗಳಲ್ಲೂ ಗುರುಪೀಠಗಳಲ್ಲೂ ಏರ್ಪಡುತ್ತಿದ್ದ ವಿವಿಧ ರೀತಿಯ ಚರ್ಚೆಗಳೂ ಒಗಟುಗಳೂ ಮಲ್ಲವಿದ್ಯೆ, ಬಿಲ್ಲುವಿದ್ಯೆ, ಕಾವ್ಯರಚನೆ ಪ್ರದರ್ಶನವೂ ಪರೀಕ್ಷೆಯ ಗುಂಪಿಗೆ ಸೇರಿದವು. ಮಧ್ಯಯುಗಗಳಲ್ಲಿ ಇಂಗ್ಲೆಂಡಿನಲ್ಲೂ ಯೂರೋಪಿನ ಕೆಲವು ದೇಶಗಳಲ್ಲೂ ಅಂದಿನ ವಿದ್ಯಾರ್ಥಿಗಳು ಪದವಿ ಪಡೆಯುವ ಮುನ್ನ ತಮ್ಮ ಸಾಧನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕಾಗಿತ್ತು. ಆದರೆ ಬರೆವಣಿಗೆಯ ಪರೀಕ್ಷೆಗಳು ಅಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಚಾರಕ್ಕೆ ಬಂದುವು. ಪಾಶ್ಚಾತ್ಯ ಶಿಕ್ಷಣ ಭಾರತಕ್ಕೆ ಆಗಮಿಸಿದಾಗ ಅದರೊಡನೆ ಆ ಪರೀಕ್ಷೆಗಳೂ ಇಲ್ಲಿಗೆ ಬಂದುವು. ಸಾರ್ವಜನಿಕ ಸ್ಥಾನಗಳಿಗೆ ಇತರ ದೇಶಗಳಂತೆ ಇಲ್ಲೂ ಪರೀಕ್ಷೆಯ ಫಲಿತಾಂಶವನ್ನು ಆಧಾರ ಮಾಡಿಕೊಳ್ಳುತ್ತಿರುವುದರಿಂದ ಜನತೆಯಲ್ಲಿ ಅವು ನೂತನ ಆಸಕ್ತಿಯನ್ನು ಮೂಡಿಸಿ ಸಮಾಜದಲ್ಲೂ ಶಿಕ್ಷಣ ಕ್ಷೇತ್ರದಲ್ಲೂ ಆಧಿಪತ್ಯ ನಡೆಸುತ್ತಿವೆ. ಇಷ್ಟು ಪ್ರಾಮುಖ್ಯಕ್ಕೆ ಬಂದಿದ್ದರೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಈ ಪರೀಕ್ಷಾ ಪದ್ಧತಿಯಲ್ಲಿ ದೋಷಗಳು ನ್ಯೂನತೆಗಳೂ ತುಂಬಿರುವ ಬಗ್ಗೆ ಏಕಪ್ರಕಾರವಾಗಿ ಟೀಕೆಗಳು ಬರುತ್ತಿವೆ.

	ಪರೀಕ್ಷೆಯ ವಿಧಗಳು : ಪರೀಕ್ಷೆ ನಡೆಸುವವರ ಉದ್ದೇಶವನ್ನು ಅನುಸರಿಸಿ ಎರಡು ರೀತಿಯ ಪರೀಕ್ಷೆಗಳನ್ನು ಗುರುತಿಸಬಹುದು. ಸಾರ್ವಜನಿಕ ಸ್ಥಾನಮಾನಗಳಿಗೆ ಅಭ್ಯರ್ಥಿಗಳನ್ನು ಆರಿಸುವ ಸ್ಪರ್ಧಾ ಪರೀಕ್ಷೆಗಳು ಮತ್ತು ಶಾಲಾಕಾಲೇಜುಗಳಲ್ಲಿ ನಡೆಸುವ ಶೈಕ್ಷಣಿ ಪರೀಕ್ಷೆಗಳು. ಇವೆರಡು ರೀತಿಯ ಪರೀಕ್ಷೆಗಳಲ್ಲೂ ಬರೆವಣಿಗೆಯ ಹಾಗೂ ವಾಚಾಪರೀಕ್ಷೆಗಳ ವಿಧಾನಗಳೂ ಬಳಯಲ್ಲಿವೆ.

	1 ಸ್ಪರ್ಧಾ ಪರೀಕ್ಷೆಗಳು : ಭಾರತದಲ್ಲಿ ಇಂಗ್ಲಿಷರು ತಮ್ಮ ಆಡಳಿತ ಯಂತ್ರಕ್ಕಾಗಿ ಅಭ್ಯರ್ಥಿಗಳನ್ನು ಆರಿಸಲು ಇಂಡಿಯನ್ ಸಿವಿಲ್ ಸರ್ವಿಸ್ (ಐ.ಸಿ.ಎಸ್.) ಪರೀಕ್ಷೆಗಳನ್ನು ನಡೆಸುತ್ತಿದ್ದರು. ಅಖಿಲ ಭಾರತದ ಸೇವಾವರ್ಗಕ್ಕೆ (ಸೇನೆ, ನೌಕೆ ಮತ್ತು ನ್ಯಾಯ-ಈ ಇಲಾಖೆಗಳನ್ನುಳಿದ) ಅಭ್ಯರ್ಥಿಗಳನ್ನು ಆರಿಸಲು ನಡೆಯುತ್ತಿದ್ದ ಈ ಪರೀಕ್ಷೆ ಮೊದಲು ಇಂಗ್ಲೆಂಡಿನಲ್ಲಿ ನಡೆಯುತ್ತಿದ್ದು ಅನಂತರ ಭಾರತದಲ್ಲೇ ನಡೆಯಲಾರಂಭವಾಯಿತು, ಸ್ವಾತಂತ್ರ್ಯಾನಂತರ ಇಂಡಿಯನ್ ಆಡ್ಮಿನಿಸ್ಟ್ರೇಷನ್ ಸರ್ವಿಸ್ (ಐ.ಎ.ಎಸ್, ಐ.ಪಿ.ಎಸ್. ಐ.ಎಫ್.ಎಸ್.) ಎಂದರೆ ಭಾರತದ ಆಡಳಿತ ಸೇವಾ ವರ್ಗದ ಪರೀಕ್ಷೆಗಳು ನಡೆಯುತ್ತಿವೆ. ಇದನ್ನು ದೆಹಲಿಯಲ್ಲಿರುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಕೇಂದ್ರದ ಲೋಕಸೇವಾ ಆಯೋಗ) ಅಗತ್ಯವೆನಿಸುವಾಗ ನಡೆಸುತ್ತದೆ. ಇವುಗಳಲ್ಲಿ ಭಾಗವಹಿಸಲು ವಯೋಮಿತಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನೂ ನಿಷ್ಕರ್ಷಿಸಿರುವರು. ಈ ಆಯೋಗ ಭಾರತ ಸರ್ಕಾರದ ಕೆಳವರ್ಗದ ವಿವಿಧ ಹುದ್ದೆಗಳಿಗೂ ಸ್ಪರ್ಧಾಪರೀಕ್ಷೆ ನಡೆಸುವುದು. ಇದೇ ರೀತಿ ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ಲೋಕಸೇವಾ ಆಯೋಗವಿರುತ್ತದೆ. ಅದು ಆಯಾ ರಾಜ್ಯಕ್ಕೆ ಅಗತ್ಯವಾಗಿ ಬೇಕಾದ ಉನ್ನತ ಹಾಗೂ ಕೆಳವರ್ಗದ ಸರ್ಕಾರಿ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆಗಳನ್ನು ನಡೆಸುತ್ತದೆ. ಕೇಂದ್ರದ ಹಾಗೂ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸುವ ಸ್ಪರ್ಧಾಪರೀಕ್ಷೆಗಳಿಗೆ ಸಹಸ್ರಗಟ್ಟಲೆ ಅಭ್ಯರ್ಥಿಗಳು ಕುಳಿತುಕೊಳ್ಳುವರು. ಅವರಲ್ಲಿ ಅಗತ್ಯವಿರುವಷ್ಟು ಮಂದಿಯನ್ನು ದಕ್ಷತೆಯ ಆಧಾರದ ಮೇಲೆ ಆರಿಸಿಕೊಳ್ಳಲಾಗುವುದು. ಕೆಲವು ಸ್ಪರ್ಧಾಪರೀಕ್ಷೆಗಳಲ್ಲಿ ಬರೆವಣೆಗೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ವ್ಯಕ್ತಿತ್ವದ ವಾಚಾ ಪರೀಕ್ಷೆಯನ್ನು (ಪರ್ಸನ್ಯಾಲಿಟಿ ಟೆಸ್ಟ್) ನಡೆಸಲಾಗುವುದು. ಅವೆರಡು ಪರೀಕ್ಷೆಗಳಲ್ಲೂ ಅಭ್ಯರ್ಥಿ ನಿರ್ವಹಿಸಿದ ಪಾತ್ರದಿಂದ ಅವನ ಸ್ಥಾನವನ್ನು ನಿಷ್ಕರ್ಷಿಸುವರು. ಖಾಸಗಿ ಸಂಸ್ಥೆಗಳೂ ತಮ್ಮ ಕಾರ್ಖಾನೆ ಕೆಲಸಕ್ಕೆ ಬೇಕಾಗುವ ಸೇವಾವರ್ಗದವರನ್ನು ಆರಿಸಿಕೊಳ್ಳುವಾಗ ತಮ್ಮದೇ ಆತ ರೀತಿಯಲ್ಲಿ ಪರೀಕ್ಷೆ ನಡೆಸುವುದುಂಟು.

	2 ಶೈಕ್ಷಣಿಕ ಪರೀಕ್ಷೆಗಳು : ಶಾಲಾಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ನಡೆಯುತ್ತವೆ. ಇವುಗಳಲ್ಲಿ ತರಗತಿಯ ಪರೀಕ್ಷೆಗಳು ಮಧ್ಯವಾರ್ಷಿಕ, ವಾರ್ಷಿಕ ಮತ್ತು ಸಾರ್ವತ್ರಿಕ ಅಥವಾ ಪಬ್ಲಿಕ್ ಪರೀಕ್ಷೆಗಳು ಎಂದು ಹಲವು ವಿಧಗಳನ್ನು ಗುರುತಿಸಬಹುದು. ಪ್ರತಿ ತಿಂಗಳೂ ನಡೆಯುವ ತರಗತಿಯ ಪರೀಕ್ಷೆಗಳನ್ನು ಆಯಾ ವಿಷಯದಲ್ಲಿ ಆಯಾ ಆಧ್ಯಾಪಕರೇ ನಡೆಸಿ ಮೌಲ್ಯಮಾಪನ ಮಾಡವವರು. ಇದರಿಂದ ತಮ್ಮ ಭೋದನಕ್ರಮದಲ್ಲಿರುವ ಲೋಪದೋಷಗಳನ್ನು ಅರಿತು ತಿದ್ದುಕೊಳ್ಳುವುದಕ್ಕೂ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವಗೆರಿ ವೈಯಕ್ತಿಕ ಗಮನ ನೀಡುವುದಕ್ಕೂ ಸಹಾಯವಾಗುತ್ತದೆ. ಮಧ್ಯವಾರ್ಷಿಕ ಪರೀಕ್ಷೆಯೂ ಈ ಉದ್ದೇಶಗಳನ್ನೇ ಸಾಧಿಸುತ್ತದೆ. ತರಗತಿಯ ವಾರ್ಷಿಕ ಪರೀಕ್ಷೆ (ಅಂತಿಮ ಪರೀಕ್ಷೆ) ವಿದ್ಯಾರ್ಥಿಗಳನ್ನು ಅವರ ಶಿಕ್ಷಣಾಭಿವೃದ್ಧಿಯ ಆಧಾರದ ಮೇಲೆ ಅದೇ ಶಾಲೆಯ ಮೇಲಿನ ತರಗತಿಗೆ ತೇರ್ಗಡೆ ಮಾಡಲು ನೆರವಾಗುತ್ತದೆ. ಕೆಲವು ಕಡೆ ಮಧ್ಯವಾರ್ಷಿಕ ಹಾಗೂ ವಾರ್ಷಿಕ ಪರೀಕ್ಷೆಗಳೆರಡರಲ್ಲೂ ಪಡೆದ ಅಂಕಗಳೆರಡನ್ನೂ ಆಧಾರ ಮಾಡಿಕೊಂಡು ತೇರ್ಗಡೆಯನ್ನು ನಿರ್ಧರಿಸುವುದುಂಟು. ತರಗತಿಯ ಮತ್ತು ಮಧ್ಯವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳಿಗಿಂತ ಹೆಚ್ಚು ಪ್ರಧಾನವಾಗಿ ಪ್ರಚಾರದಲ್ಲಿರುತಕ್ಕವು ಸಾರ್ವತ್ರಿಕ ಪರೀಕ್ಷೆಗಳು. ಅವನ್ನು ಮುಂದೆ ಪರಿಶೀಲಿಸಿದೆ.

	ತರಗತಿಯ ಪರೀಕ್ಷೆಗಳೂ ಅರ್ಧವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳೂ ಸಾಮಾನ್ಯವಾಗಿ ಆಂತರಿಕ ಪರೀಕ್ಷೆಗಳಾಗಿದ್ದು ಬೋಧಿಸುವವರೇ ಪರೀಕ್ಷಕರೂ ಆಗಿರುತ್ತಾರೆ. ಆದರೆ ಸಾರ್ವತ್ರಿಕ ಪರೀಕ್ಷೆಗಳು ಹೊರಗಿನವರಿಂದ ನಡೆಯತಕ್ಕವು ಕೆಲವು ಕಡೆ ಆಂತರಿಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಸ್ವಲ್ಪಮಟ್ಟಿಗೆ ಸಾರ್ವತ್ರಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳೊಡನೆ ಸೇರಿಸಿಕೊಳ್ಳುವುದು ಆರಂಭವಾಗಿದ್ದರೂ ಅದರಲ್ಲಿ ಶಾಲೆಯ ಹಾಗೂ ಬೋಧಿಸುವವರ ಕೈವಾಡ ಅಷ್ಟಾಗಿ ಇರುವುದಿಲ್ಲ. ವಿದ್ಯಾರ್ಥಿಗಳು ಪಡೆದಿರುವ ಶಿಕ್ಷಣದ ಗುರುತಾಗಿ ನಿರ್ದಾಕ್ಷಿಣ್ಯ ರೀತಿ ಪರೀಕ್ಷೆ ನಡೆಸಿ ಯೋಗ್ಯತಾಪತ್ರ ಕೊಡುವುದು ಸಾರ್ವತ್ರಿಕ ಪರೀಕ್ಷೆಯ ಪ್ರಧಾನ ಉದ್ದೇಶ. ಅದರಲ್ಲಿ ಪ್ರತಿ ವಿದ್ಯಾರ್ಥಿಯೂ ಪ್ರತಿ ವಿಷಯದಲ್ಲೂ ಎಷ್ಟರ ಮಟ್ಟಿನ ಶಿಕ್ಷಣ ಸಾಧಿಸಿರುವನೆಂದು ಗುರುತಿಸಲಾಗುತ್ತದೆ. ಇದರ ಆಧಾರದ ಮೇಲೆ ಮೇಲಿನ ಅಂತಸ್ತಿನ ಶಿಕ್ಷಣ ಸಂಸ್ಥೆಗೆ ಸೇರಲು ವಿದ್ಯಾರ್ಥಿಗೆ ಇರುವ ಅರ್ಹತೆಯನ್ನು ಗೊತ್ತುಮಾಡಲಾಗುತ್ತದೆ. ಜೊತೆಗೆ ಆ ಪರೀಕ್ಷೆಯ ಫಲಿತಾಂಶವನ್ನು ಸರ್ಕಾರದ ಕೆಲವು ಹಾಗೂ ಎಲ್ಲಾ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ನೇಮಕಮಾಡಿಕೊಳ್ಳುವಾಗ ಪರಿಗಣಿಸಲಾಗುತ್ತಿದೆ ಅಧ್ಯಾಪಕರು ಎಷ್ಟರಮಟ್ಟಿಗೆ ಪಾಠ ಮಾಡಿರುವರೆಂಬುದನ್ನು ಅರಿತುಕೊಳ್ಳಲು ಶಿಕ್ಷಣ ಶಾಖೆಯ ಮೇಲ್ವಿಚಾರಕರಿಗೆ ಈ ಪರೀಕ್ಷೆ ಸಹಾಯ ಮಾಡುತ್ತದೆ. ಕೆಲವು ವೇಳೆ ವಿದ್ಯಾರ್ಥಿ ವೇತನ ನೀಡುವಾಗಲೂ ಇದರ ಫಲಿತಾಂಶವನ್ನು ಆಧಾರ ಮಾಡಿಕೊಳ್ಳವುದುಂಟು. ಎಂದಮೇಲೆ ಸಾರ್ವತ್ರಿಕ ಪರೀಕ್ಷೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಾತರ ಹುಟ್ಟಿಸುವಂತೆ ಅಧ್ಯಾಪಕರ ಹಾಗೂ ಶಿಕ್ಷಣ ಶಾಖೆಯ ಆಡಳಿತಗಾರರಲ್ಲೂ ಕಾತರ ಹುಟ್ಟಿಸುತ್ತದೆ. ಮೇಲಿನ ಹಲವಾರು ಉದ್ದೇಶಗಳನ್ನು ಸಾಧಿಸಲು ಹೊರಟಿದ್ದರೂ ಅದು ಯಾವ ಉದ್ದೇಶವನ್ನೂ ಸಮರ್ಪಕವಾಗಿ ಸಾಧಿಸುತ್ತಿಲ್ಲವೆಂಬ ಟೀಕೆ ಎಲ್ಲ ಕಡೆಯೂ ಕೇಳಿ ಬರುತ್ತಿದೆ. ಜೊತೆಗೆ ಇದರಲ್ಲಿ ಹಲವು ಬಗೆಯ ಲೋಪದೋಷಗಳೂ ಇವೆ.

	ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ವಿದ್ಯಾರ್ಥಿಯ ಮುಂದಿನ ಜೀವನದ ಮೇಲೆ ನಿಕಟ ಪರಿಣಾಮ ಬೀರುವುದರಿಂದ ಅದಕ್ಕೆ ಸಮಾಜದಲ್ಲಿ ಅತಿಯಾದ ಪ್ರಾಮುಖ್ಯ ಬಂದುಬಿಟ್ಟಿದೆ. ಇದರ ಫಲವಾಗಿ ಸಂಬಂಧಿಸಿದವರೆಲ್ಲರ ಮೇಲೂ ದುಷ್ಪರಿಣಾಮಗಳಾಗುತ್ತಿವೆ. ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಆಧ್ಯಾಪಕರು ಶಿಕ್ಷಣ ಸಾಧಿಸಬೇಕಾದ ಗುರಿ ಹಾಗೂ ಅನುಸರಿಸಬೇಕಾದ ಮಾರ್ಗಗಳಿಗೆ ತಿಲಾಂಜಲಿ ಬಿಟ್ಟು ಪರೀಕ್ಷಕರು ಹೇಳುವ ಪ್ರಶ್ನೆಗಳಿಗೆ ಉತ್ತರ ವೊದಗಿಸುವ ಕಾರ್ಯದಲ್ಲಿ ನಿರತರಾಗುವರು. ವಿದ್ಯಾರ್ಥಿಗಳು ಅವನ್ನು ಉರುಹಾಕಲು ಯತ್ನಿಸುವರು. ಇದರಿಂದ ಶಿಕ್ಷಣ ಸಾಧಿಸಬೇಕಾದ ಉದಾತ್ತ ಸಾಧನೆ ಈಡೇರದಾಗುತ್ತದೆ. ತಮ್ಮ ಜೀವನದ ಮೇಲೆ ಪರಿಣಾಮ ಬೀರಲಿರುವ ಪರೀಕ್ಷೆಗಳೆಂದರೆ ವಿದ್ಯಾರ್ಥಿಗಳಿಗೂ ಕಾತರ, ಭೀತಿ, ಹೇಗಾದರೂ ಮಾಡಿ ಅದರಲ್ಲಿ ಉತ್ತೀರ್ಣರಾದರೆ ಸಾಕೆಂದು ಅಹಿತ ಮಾರ್ಗವನ್ನು ಅನುಸರಿಸಲೂ ಅವರು ಉದ್ಯುಕ್ತರಾಗಬಹುದು. ಇದರ ಕಹಿಫಲ ಅವರ ದೇಹ, ಮನಸ್ಸು, ಮುಂದಿನ ಜೀವನ ಇವೆಲ್ಲದರ ಮೇಲೂ ಉಂಟಾಗಿ ಅವರ ವ್ಯಕ್ತಿತ್ವ ಕುಂಠಿತವಾಗಬಹುದು. ಇಂಥ ದುಷ್ಪರಿಣಾಮಗಳ ಜೊತೆಗೆ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಲ್ಲೇ ಲೋಪದೋಷಗಳು ಇದ್ದು ಅದು ವಿದ್ಯಾರ್ಥಿಯ ಶಿಕ್ಷಣಾಭಿವೃದ್ಧಿಯನ್ನು ಸಮರ್ಪಕವಾಗಿ ಅಳೆಯಲಾರದ್ದಾಗಿದೆ.

	ಸಾಂಪ್ರದಾಯಿಕ ಪರೀಕ್ಷೆಗಳು ಪ್ರಬಂಧರೀತಿಯ ಉತ್ತರವನ್ನು ಬಯಸುತ್ತವೆ. ಇದರಿಂದಾಗಿ ಒಬ್ಬೊಬ್ಬ ಮೌಲ್ಯಮಾಪಕನೂ ಒಂದೊಂದು ರೀತಿಯಲ್ಲಿ ಬೆಲೆ ಕಟ್ಟುವ ಅವಕಾಶವಿರುತ್ತದೆ. ಸಾಮಾನ್ಯವಾಗಿ ಉತ್ತರ ಪತ್ರಿಕೆಗೆ ಶೇಕಡಾ ಪ್ರಮಾಣದಲ್ಲಿ ಅಂಕಗಳನ್ನು ಕೊಡಲಾಗುತ್ತದೆ. ಅದರಿಂದ ಅವನು ಸರಾಸರಿಯೇ, ಉತ್ತಮನೆ, ಅಥವಾ ಮಧ್ಯಮಟ್ಟದವನೇ ಎಂಬುದು ಗೊತ್ತಾಗುವುದಿಲ್ಲ. ಬರವಣೆಗೆಯೇ ಹೆಚ್ಚಾಗಿರುವ ಉತ್ತರಗಳನ್ನು ಬೆಲೆ ಕಟ್ಟುವಾಗ ಬರೆವಣೆಗೆಯ ಅಂದಚೆಂದಗಳೂ ವಿದ್ಯಾರ್ಥಿಯ ಭಾಷಾಶಕ್ತಿಯೂ ಮೌಲ್ಯಮಾಪಕರ ಮೇಲೆ ಪರಿಣಾಮ ಬೀರುತ್ತವಾಗಿ ಪರೀಕ್ಷೇಯಲ್ಲಿ ಅವನ ವಿಷಯ ಜ್ಞಾನವನ್ನು ಸಮರ್ಪಕವಾಗಿ ಅಳೆಯಲು ಆಗುವುದಿಲ್ಲ. ವೇಗವಾಗಿ ಬರೆಯಬಲ್ಲವರು ಉತ್ತರ ಜಾಗ್ರತೆಯಾಗಿ ಎಲ್ಲ ಪ್ರಶ್ನೆಗಳನ್ನೂ ಉತ್ತರಿಸಿದರೆ ನಿಧಾನವಾಗಿ ಬರೆಯುವವರಿಗೆ ಉತ್ತರ ಗೊತ್ತಿದ್ದರೂ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯಲು ಅಡಚಣೆಯಾಗಿ ಅವರಿಗೆ ಕಡಿಮೆ ಅಂಕ ಬರುವಂತಾಗುತ್ತದೆ. ಅಷ್ಟು ಪ್ರತಿಭಾವಂತರಲ್ಲದ ವಿದ್ಯಾರ್ಥಿಗಳು ಕೇವಲ ಬಾಯಿಪಾಠ ಮಾಡಿದ ಅಂಶಗಳನ್ನು ತದ್ವತ್ತಾಗಿ ಇಳಿಸಿ ಪೂರ್ಣ ಅಂಕ ಪಡೆಯಬಹುದು. ಹೆಚ್ಚು ವಿವೇಚನಾ ಶಕ್ತಿಯುಳ್ಳ ವಿದ್ಯಾರ್ಥಿ ಉರುಹಾಕದಿದ್ದರೆ ಅಷ್ಟಾಗಿ ಅಂಕ ಪಡೆಯಲು ಅಸಾಧ್ಯವಾಗುತ್ತದೆ. ಅನೇಕ ವೇಳೆ ಪ್ರಶ್ನೆಗಳು ನಿರ್ದಿಷ್ಟ ಉತ್ತರ ಬಯಸದೆ ಹಲವಾರು ಬಗೆಯ ಉತ್ತರಕ್ಕೆ ಎಡೆಗೊಡುವುದರಿಂದ ಮೌಲ್ಯಮಾಪನ ಒಂದೇ ಸಮವಾಗಿರುವುದಿಲ್ಲ.

	ಸಾಂಪ್ರದಾಯಿಕ ಪರೀಕ್ಷೆ ಇಷ್ಟೊಂದು ಲೋಪದೋಷಗಳನ್ನು ನ್ಯೂನತೆಗಳನ್ನೂ ಪಡೆದಿದ್ದು ಶಿಕ್ಷಣಕ್ಷೇತ್ರದ ಮೇಲೂ ವಿದ್ಯಾರ್ಥಿ ಮತ್ತು ಸಮಾಜಗಳ ಮೇಲೂ ದುಷ್ಪರಿಣಾಮ ಬೀರುತ್ತಿರುವದಾದರೂ ಪೂರ್ಣವಾಗಿ ಪರೀಕ್ಷೆಗಳನ್ನೇ ತೊಡೆದುಹಾಕುವುದರಿಂದ ಇನ್ನೂ ಹೆಚ್ಚಿನ ಅನಾನುಕೂಲವಾಗುವುದು. ತಮ್ಮ ಮಕ್ಕಳ ಶಿಕ್ಷಣಾಭಿವೃದ್ಧಿಯನ್ನು ಅವಲಂಬಿಸಿರುವ ಪೋಷಕರಿಗೆ, ತಮ್ಮ ಮಕ್ಕಳಿಗೆ ಪದವಿ ಪ್ರಶಸ್ತಿಗಳು ದೊರೆತ ಹೊರತು ತೃಪ್ತಿಯಾಗುವುದಿಲ್ಲ. ಅವಿಲ್ಲದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯಲ್ಲಿ ಉತ್ಸಾಹ ತೋರಲಾರರು. ಅದರ ಫಲಿತಾಂಶವೇ ಕೆಲಸ ಮಾಡಲು ಆಧರವಾಗಬೇಕಾಗಿರುವುದರಿಂದ ಸರ್ಕಾರಕ್ಕೂ ಖಾಸಗಿ ಸಂಸ್ಥೆಗಳಿಗೂ ಕೆಲಸಕ್ಕೆ ನೇಮಿಸಿಕೊಳ್ಳಲು ಯಾವ ಆಧಾರವೂ ಇಲ್ಲದಂತಾಗುತ್ತದೆ. ಇವೆಲ್ಲ ಕಾರಣಗಳಿಂದಾಗಿ ನ್ಯೂನತೆಗಳಿದ್ದರೂ ಪರೀಕ್ಷೆಯನ್ನು ಕೈಬಿಡುವುದರ ಬದಲು ಅದನ್ನು ಸುಧಾರಿಸಿ ಉತ್ತಮಪಡಿಸಿಕೊಳ್ಳವುದು ರಾಜಮಾರ್ಗವೆನಿಸುತ್ತದೆ. ಆದ್ದರಿಂದ ಶಿಕ್ಷಣವೇತ್ತರು ಅದರ ಸುಧಾರಣೆಗಾಗಿ ಅನೇಕ ಯತ್ನಗಳನ್ನು ನಡೆಸಿದ್ದಾರೆ. ಅದರ ಫಲವಾಗಿ ನೂತನ ಪರೀಕ್ಷಾ ಪದ್ಧತಿಯೊಂದು ಪ್ರಚಾರಕ್ಕೆ ಬರುತ್ತಿದೆ. (ನೋಡಿ- ನೂತನ-ಪರೀಕ್ಷಣಗಳು)								(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ